Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/15

From Wikisource
This page has been validated.

ಮಾತ್ರವಲ್ಲದೆ ಅಡಿಗೆ ಕೋಣೆಗೆ ಸೀಮಿತವಾಗಿದ್ದ ಮಹಿಳೆಯರೂ ಹೊರಗೆ ಹೋಗಿ ದುಡಿಯುವಂತೆ ಅವಕಾಶ ಕಲ್ಪಿಸಿದ್ದಾರೆ.

ತಮ್ಮ ಕಬ್ಬಿಣ ಕಾರ್ಖಾನೆಗಳಲ್ಲಿ ಗಟ್ಟಿಮುಟ್ಟಾದ ಲಾಕರ್‌ಗಳನ್ನು ನಿರ್ಮಿಸುತ್ತಿದ್ದ ಇವರು ಕಡಂಬಿಲ(1903), ಕಾಸರಗೋಡು(1894), ಪರಂಗಿಪೇಟೆ(1879) ಈ ಮೂರು ಕಡೆಗಳಲ್ಲಿರುವ ಕಬ್ಬಿಣದ ಸೇತುವೆ ನಿರ್ಮಿಸಿರುತ್ತಾರೆ. ಗಡಿಯಾರ ತಯಾರಿಯ ಕಾರ್ಯದಲ್ಲಿಯೂ ಇವರು ತೊಡಗಿದ್ದು ಇವರು ನಿರ್ಮಿಸಿದ ಬೃಹತ್ ಗಡಿಯಾರವೊಂದು ಮಂಗಳೂರಿನ ಸ್ಟೇಟ್‌ ಬ್ಯಾಂಕ್ ಬಳಿಯಲ್ಲಿರುವ ಸೈಂಟ್ ಪೌಲ್ ಚರ್ಚ್‌ನ ಗೋಪುರದಲ್ಲಿ ಇಂದಿಗೂ ಇದ್ದು ಚರಿತ್ರೆ ಹೇಳುತ್ತಿದೆ.

ಮುಲ್ಕಿ ಮತ್ತು ಮಂಗಳೂರಿನಲ್ಲಿ ನೇಯಿಗೆ ಕಾರ್ಖಾನೆಯನ್ನು ಸ್ಥಾಪಿಸಿದ ಇವರು ಜಿಲ್ಲೆಯಾದ್ಯಂತ ದೇಶೀಯವಾಗಿ ಬಳಕೆಯಲ್ಲಿದ್ದ ಮಗ್ಗವನ್ನು ಉನ್ನತ ಮಟ್ಟಕ್ಕೇರಿಸಿ ಜಿಲ್ಲೆಯ ಜನರು ಹೆಚ್ಚೆಚ್ಚಾಗಿ ಇದರಲ್ಲಿ ತೊಡಗಿಸಿಕೊಳ್ಳುವಂತೆ ಕಾರ್ಯಪ್ರವರ್ತರಾದರು. ಮಲ್ಪೆ, ಕೊರಂಗ್ರಪಾಡಿ, ಉಡುಪಿ, ಪಾಂಗಾಳ, ಮುಲ್ಕಿ, ಮಂಗಳೂರು ಮುಂತಾದ ಪ್ರದೇಶಗಳಲ್ಲಿದ್ದ ಮಗ್ಗಗಳೇ ಅವಕ್ಕೆ ಸಾಕ್ಷಿ. ಬಟ್ಟೆ ತಯಾರಿಸುವ ಕಾರ್ಯದಲ್ಲಿ ತೊಡಗಿ ಖಾಕಿ ಬಟ್ಟೆಯನ್ನು ಕಂಡುಹಿಡಿದು ಪೋಲಿಸ್ ಇಲಾಖೆ ಹಾಗೂ ಮೆಕ್ಯಾನಿಕಲ್ ವಿಭಾಗದಲ್ಲಿ ಖಾಕಿ ಬಳಕೆಗೆ ತಂದ ಕೀರ್ತಿ ಬಾಸೆಲ್ ಮಿಶನರಿಗಳಿಗೆ ಸೇರಿದ್ದಾಗಿದೆ.

ಅವಿದ್ಯಾವಂತರಿಗೆ ವಿದ್ಯೆ,ಉದ್ಯೋಗವಿಲ್ಲದವರಿಗೆ ಉದ್ಯೋಗ, ವಸತಿಹೀನರಿಗೆ ವಸತಿ ಸೌಕರ್ಯ, ಭೂಮಿ ಕಳೆದುಕೊಂಡವರಿಗೆ ಕೃಷಿ ಭೂಮಿ, ಸಂಸ್ಥೆಯ ಆದಾಯ ಹೆಚ್ಚಿಸಲು ಹಾಗೂ ಜನಸಾಮಾನ್ಯರ ಆರ್ಥಿಕಾಭಿವೃದ್ಧಿ ದೃಷ್ಟಿಯಿಂದ ಕೃಷಿ ಸಂಬಂಧವಾಗಿ, ಮೂಡಬಿದ್ರೆ, ಮುಲ್ಕಿ, ಸಂಕಲಕರಿಯ, ಬೊಲ್ಮ ಅಮ್ಮೆಂಬಳ, ಆನಂದಪುರ, ಉಚ್ಚಿಲ ಮುಂತಾದ ಕಡೆಗಳಲ್ಲಿ ಸಾವಿರಾರು ಎಕ್ರೆ ಭೂಮಿ ಖರೀದಿ ಮಾಡಿದ್ದರು. ಕುತ್ಯಾರ್, ಕಾರ್ಕಳ, ಬೈಲೂರು ಸಂಕಲಕರಿಯಗಳಲ್ಲಿ ಕಾಡು ಕಡಿದು ವ್ಯವಸಾಯ, ಕೃಷಿ ತರಬೇತಿ ಮುಂತಾದ ಹತ್ತು ಹಲವಾರು ಕಾರ್ಯಗಳನ್ನು ಮಾಡಿದ್ದರು. ಕೃಷಿಕ್ಷೇತ್ರದಲ್ಲಿ ಇವರು ಮಾಡಿದ ಕಾರ್ಯಗಳನ್ನು ಕೂಲಂಕಶವಾಗಿ ಪರಿಶೀಲಿಸಿದರೆ ಕಾಡು ಕಡಿದು ಗದ್ದೆ ಮಾಡಿದ್ದು, ವ್ಯರ್ಥವಾಗಿ ಹರಿಯುವ ನೀರನ್ನು ಬಳಸಿ ಕೃಷಿ ಮಾಡುವುದು, ಬೊಟ್ಟುಗದ್ದೆ ಅಥವಾ ಕಡಿಮೆ ನೀರಿರುವ ಪ್ರದೇಶಗಳಲ್ಲಿ ಕೃಷಿ, ಮುಂತಾದ ಹತ್ತು ಹಲವಾರು ವಿದಧ ಯೋಗ್ಯ ವಿಚಾರಗಳು ನಮಗೆ ತಿಳಿಯುತ್ತದೆ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
03
●——