Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/148

From Wikisource
This page has been proofread.

ಹತ್ತನೇ ಶತಮಾನದ ಉತ್ತರಾರ್ಧದಲ್ಲಾದಂಥ ಮೂರು ಕವಿರತ್ನಗಳೆಂದು ಹೆಸರು ಪಡೆದಂಥ ಪಂಪ, ಹೊನ್ನ, ರನ್ನರೆಂಬ ಕವೀಶ್ವರರ ಗ್ರಂಥಗಳು ಕನ್ನಡದ ಅತ್ಯುಜ್ವಲ ಸ್ವರೂಪವನ್ನು ತೋರಿಸುತ್ತವೆ. ಹನ್ನೆರಡನೇ ಹದಿಮೂರನೇ ಶತಮಾನಗಳಲ್ಲಿ ನಯಸೇನಮ, ಜನ್ನ, ಕೇಶಿರಾಜ, ಆಂಡಯ್ಯ ಇವರೇ ಮೊದಲಾದ ಕವಿಶ್ರೇಷ್ಠರು ಬರೆದ ಗ್ರಂಥಗಳು. ಜೈನರು ಬರೆದ ಅಂತಿಮವಾದ ಉದ್ದಂಥಗಳಾಗಿರುತ್ತವೆ.

ಹನ್ನೆರಡನೇ ಶತಮಾನದ ಆದಿಭಾಗದಲ್ಲಿ ವೈಷ್ಣವಮತವೂ, ಅಂತ್ಯಭಾಗದಲ್ಲಿ ವೀರಶೈವ ಮತವೂ ಉದಯಕ್ಕೆ ಬಂದದ್ದರಿಂದ ಜೈನರ ಪ್ರಾಬಲ್ಯವು ಕುಗ್ಗಿತು. ಆದ್ದರಿಂದ ಹದಿಮೂರನೇ ಶತಮಾನದಿಂದ ಮುಂದೆ ಎರಡು ಶತಮಾನಗಳಲ್ಲಿ ವೀರಶೈವ ಕವಿಗಳು ಬರೆದ ಗ್ರಂಥಗಳೇ ಹೆಚ್ಚು: ಬ್ರಾಹ್ಮಣಕವಿಗಳು ಬರೆದ ಗ್ರಂಥಗಳು ಕೆಲವು ಇರುತ್ತವೆ; ಆದರೆ ಜೈನರು ಬರೆದ ಗ್ರಂಥಗಳು ಅಲ್ಲೊಂದಿಲ್ಲೊಂದು ಮಾತ್ರ ಕಂಡು ಬರುತ್ತದೆ. ರಗಳೆ ಷಟ್ಟದಿಗಳನ್ನು ಪ್ರಚಾರದಲ್ಲಿ ತಂದವರು ಲಿಂಗಾಯತ ಕವಿಗಳೇ. ಇವರಲ್ಲಿ ಹರೀಶ್ವರ,ರಾಘವಾಂಕ, ಸೋಮನಾಥ, ಗುರುಲಿಂಗ, ತೋಂಟದಾರ್ಯ ಇವರ ಹೆಸರುಗಳನ್ನು ಹೇಳಬಹುದು. ಮುಂದೆ ಹದಿನಾಲ್ಕನೇ ಶತಮಾನದಿಂದ ಪ್ರಬಲರಾದ ವಿಜಯನಗರದ ಅರಸರ ಆಳಿಕೆಯಲ್ಲಿ, ಮುಖ್ಯವಾಗಿ ವಿದ್ಯಾ ಪಕ್ಷಪಾತಿಗಳಾದ ಕೃಷ್ಣರಾಯರ ಕಾಲದಲ್ಲಿ, ಬ್ರಾಹ್ಮಣ ಕವಿಗಳು ಉದಾರಾಶ್ರಯವನ್ನು ಹೊಂದಿದರು. ಇವರಲ್ಲಿ ಕುಮಾರವ್ಯಾಸ, ಕುಮಾರವಾಲ್ಮೀಕಿ, ರುದ್ರಭಟ್ಟ, ಲಕ್ಷ್ಮೀಶ ಮೊದಲಾದವರ ಗ್ರಂಥಗಳು ಹೆಸರಾಗಿವೆ. ಇದೇ ಕಾಲದಲ್ಲಿ ಆದ ಸಾಲ್ವ, ಭಟ್ಟಾಕಲಂಕರೇ ಮೊದಲಾದ ಹಲವು ಜೈನರ ಗ್ರಂಥಗಳೂ, ವಿರೂಪಾಕ್ಷಪಂಡಿತ, ಷಡಕ್ಷರದೇವರೇ ಮೊದಲಾದ ಲಿಂಗವಂತಕವಿಗಳ ಗ್ರಂಥಗಳೂ ಹೆಸರಾಗಿವೆ.

ಕನ್ನಡದಲ್ಲಿ ಇದುವರೆಗೆ ಆದ ಉದ್ಧಂಥಗಳು ಬಹುತರವಾಗಿ ಹಳಗನ್ನಡ ಕವಿತಾರೂಪದಿಂದಲೇ ಇರುತ್ತವೆ. ಆದರೆ ಇತ್ತಲಾಗಿ ಒಂದೆರಡು ಶತಮಾನಗಳಲ್ಲಿ ಹಳಗನ್ನಡದ ಪ್ರಚಾರವು ಕಡಿಮೆಯಾದ್ದರಿಂದಲೂ, ಹೊಸಗನ್ನಡವು ಕವಿತಾರಚನೆಗೆ ಅಷ್ಟು ಅನುಕೂಲವಾದ ಭಾಷೆಯಲ್ಲವಾದ್ದರಿಂದಲೂ, ಇತ್ತಲಾಗಿ ಹೇಳತಕ್ಕಂಥ ಕವಿತಾಗ್ರಂಥಗಳು ಆಗಿಲ್ಲ. ಇದಲ್ಲದೆ ದೇಶಕಾಲಾನುಸಾರವಾಗಿ ಪಂಡಿತರಿಗೆ ಮಾತ್ರ ಅವಗಾಹನೆಯಾಗುವ ಕ್ಲಿಷ್ಟ ಕಾವ್ಯಗಳ ಕಾಲವು ಕಳೆದುಹೋಗಿ, ಪಾಮರರಿಗೂ ಜ್ಞಾನಾಮೃತವನ್ನುಣಿಸುವಂಥ ಗದ್ಯಗ್ರಂಥಗಳು ಹುಟ್ಟುವ ಕಾಲವು ಒದಗಿರುತ್ತದೆ. ಆದರೆ ಮಾದರಿ ತೆಗೆದುಕೊಳ್ಳತಕ್ಕಂಥ ಗದ್ಯಗ್ರಂಥಗಳು ಇನ್ನೂ ಹುಟ್ಟಿರುವುದಿಲ್ಲ.

136 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...