Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/110

From Wikisource
This page has been proofread.

ಕ್ರೈಸ್ತರಿಗೆ ಸಹಾಯಕವಾಗಿದ್ದವು. ಈಗ ಮುನ್ನಡೆಯುತ್ತಿರುವ ಕ್ರೈಸ್ತ ಉತ್ತರಕ್ರಿಯೆ ಸಹಾಯಕ ಸಂಘ, ಜೆಪ್ಪು (1901) ಮಂಗಳೂರು ಪ್ರೊಟೆಸ್ಟಂಟ್ ಕ್ರಿಶ್ಚನ್ ಫ್ರೆಂಡ್ ಇನ್ ನೀಡ್ ಸೊಸೈಟಿ(1911) ಪ್ರೊಟೆಸ್ಟಂಟ್ ಕ್ರಿಶ್ಚನ್ ಕೋ ಅಪರೇಟಿವ್ ಸೊಸೈಟಿ (1918) ಜಪ್ಪು ಕ್ರಿಶ್ಚನ್ ಬರಿಯೆಲ್ ಎಯಿಡ್ ಸೊಸೈಟಿ(1951) ಬಲ್ಮಠ ಕ್ರೈಸ್ತ ಬಡವರ ಸಂಘ(1951) ಮುಂತಾದವುಗಳು ಈಗಲೂ ಸಭಾ ಆಡಳಿತದಿಂದ ಹೊರಗಿದ್ದುಕೊಂಡು ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. 1914ರ ಮಹಾಯುದ್ಧದ ಸಂದರ್ಭದಲ್ಲಿ ಉಂಟಾದ ಸಂಕಷ್ಟಕ್ಕಿಂತ ಮೊದಲೇ ಸಭಾ ಆಡಳಿತಕ್ಕಿಂತ ಹೊರಗೆ ಇದ್ದು ಸಮಾಜದ ಏಳಿಗೆಗಾಗಿ ಹಲವಾರು ದೇಶೀಯ ನಾಯಕರು ಪಣತೊಟ್ಟಿರುವ ನಿದರ್ಶನಗಳ ಉಲ್ಲೇಖಗಳು ಮಿಶನ್ ವರದಿಗಳಲ್ಲಿ ಸಿಗುತ್ತವೆ. ಅಲ್ಲದೆ ದೇಶೀಯ ಕ್ರೈಸ್ತರ ಮಾಲಕತ್ವದಲ್ಲಿ ಪ್ರಾರಂಭವಾಗಿ ಮುನ್ನಡೆಯುತ್ತಿದ್ದ ಹೊಸೈರಿ ಕ್ಷೇತ್ರಗಳೂ ಚರಿತ್ರೆ ಸೇರಿವೆ.

ಕ್ರಿಶ್ಚನ್ ನಿಟ್ಟಿಂಗ್ ವರ್ಕ್ಸ್: ಮಡಿಕೇರಿ ಗುಡ್ಡೆಯಲ್ಲಿದ್ದ ಶ್ರೀ ಮಿಕಾಯೇಲ್ ಮಾಬೆನ್‌ರವರು 17ಕ್ಕೂ ಮಿಕ್ಕಿ ಮಗ್ಗಗಳನ್ನು ಸ್ಥಾಪಿಸಿ ನೇಯಿಗೆ ಕೆಲಸ ಮಾಡಿಸುತ್ತಿದ್ದರು. 1920 ರಲ್ಲಿ ಅದೇ ಪರಿಸರದಲ್ಲಿ “ಕ್ರಿಶ್ಚನ್ ನಿಟ್ಟಿಂಗ್ ವರ್ಕ್ಸ್ ಎಂಬ ಸಿದ್ಧ ಉಡುಪುಗಳ ತಯಾರಿಕಾ ಘಟಕವನ್ನು ಪ್ರಾರಂಭಿಸಿ 1942 ತನಕ ನಡೆಸುತ್ತಿದ್ದರು. 20ಕ್ಕೂ ಹೆಚ್ಚು ಮಂದಿ ನೌಕರರಿದ್ದರು. 4 ಮಂದಿ ಮಾರಾಟ ಪ್ರತಿನಿಧಿಗಳು ಉತ್ಪನ್ನಗಳನ್ನು ದಕ್ಷಿಣ ಕನ್ನಡ, ಕಾಸರಗೋಡು, ಕಣ್ಣೂರು, ಕೋಯಿಕೊಡ್ ಮುಂತಾದ ಕಡೆಗಳಿಗೆ ಮಾರಾಟ ಮಾಡುತ್ತಿದ್ದು ಜಿಲ್ಲೆಯಲ್ಲಿಯೇ 2ನೆಯ ಬನಿಯನ್ ಉತ್ಪಾದನಾ ಘಟಕವೆಂಬ ಹೆಸರು ಪಡೆದಿತ್ತು.

ಪ್ರೊಟೆಸ್ಟಾಂಟ್ ಕ್ರಿಶ್ಚನ್ ಕೋ ಅಪರೇಟಿವ್ ಸೊಸೈಟಿ ಸ್ಥಾಪಿಸಿದ ಕೈಗಾರಿಕಾ ಶಾಖೆ : 1918ರಲ್ಲಿ ಮಂಗಳೂರಿನ ಬಲ್ಮಠ ಮಿಶನ್ ಕಂಪೌಂಡ್‌ನಲ್ಲಿ ಪ್ರಾರಂಭಗೊಂಡ ಪ್ರೊಟೆಸ್ಟಾಂಟ್ ಕ್ರಿಶ್ಚನ್ ಕೋ ಅಪರೇಟಿವ್ ಸೊಸೈಟಿ ಬ್ಯಾಕಿಂಗ್ ವ್ಯವಹಾರವನ್ನು ಮಾತ್ರ ನಡೆಸುತ್ತಿತ್ತು. 1939 ಸಂಘದ ಸದಸ್ಯರಿಗೆ ಮತ್ತು ಸಮಾಜ ಬಾಂಧವರಿಗೆ ಕೆಲಸವನ್ನು ಕಲ್ಪಿಸಿಕೊಟ್ಟು ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈಗಾರಿಕಾ ಶಾಖೆಯನ್ನು ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಿಸಿತು. ಸಂಘವು ಬರೇ ಸಾಲವನ್ನು ಕೊಡುವ ಸಂಸ್ಥೆಯಾಗಿ ಮುಂದುವರಿದರೆ ಸಾಲದು ಅದರ ಕಾರ್ಯಕ್ಷೇತ್ರವನ್ನು ವಿಸ್ತರಿಸಬೇಕೆಂಬ ಉದ್ದೇಶದಿಂದ ಪ್ರಾರಂಭವಾದ ಈ ಸಂಸ್ಥೆಯಿಂದ ಬನಿಯನುಗಳನ್ನು ತಯಾರಿಸುವ ಕಾರ್ಯಾಚರಣೆ ಆರಂಭವಾಯಿತು. ಇದಕ್ಕೆ ಪ್ರತ್ಯೇಕ ಪಾಲುದಾರರ ವ್ಯವಸ್ಥೆ ಮಾಡಲಾಗಿದ್ದು

98

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...'